ಪೇಲಿಯೊಸೀನ್
- ಟರ್ಷಿಯರಿ (ತೃತೀಯಕ) ಯುಗಕ್ಕೆ ಸೇರಿದ ಕಲ್ಪ.  65-60 ದಶಲಕ್ಷ ವರ್ಷ ಪ್ರಾಚೀನ ಕಾಲಕ್ಕೆ ಸೇರಿದೆ.  ಇದು ನಿಕ್ಷೇಪಗೊಳ್ಳುವ ವೇಳೆಗೆ ಮಧ್ಯ ಜೀವಕಲ್ಪದ ವಿಶೇಷ ಮತ್ತು ಪ್ರಮುಖ ಜೀವೀವರ್ಗಗಳ ವಂಶ ನಷ್ಟವಾಗಿತ್ತು ಎಂದೇ ಆ ಅವಶೇಷಗಳು ಇವುಗಳಲ್ಲಿಲ್ಲ.  ಆಗ ಆಧುನಿಕ ಜೀವಕಲ್ಪದ ಪ್ರಮುಖ ಜೀವಿ ವರ್ಗಗಳು ಇನ್ನೂ ನೆಲೆಯೂರಿರಲಿಲ್ಲ.  ಆದ್ದರಿಂದ ಇವುಗಳ ಅವಶೇಷಗಳೂ ಅತಿ ವಿರಳ ಅಥವಾ ಶೂನ್ಯ.  ಹೀಗೆ ಮಧ್ಯೆ ಜೀವಕಲ್ಪ ಮತ್ತು ಆಧುನಿಕ ಜೀವಕಲ್ಪಗಳ ನಡುವಣ ಅವಧಿಯನ್ನು ಪೇಲಿಯೊಸೀನ್ ಪ್ರತಿನಿಧಿಸುತ್ತದೆ.  ಈ ಸ್ತೋಮ ನಿಕ್ಷೇಪಗೊಳ್ಳುವ ವೇಳೆಗೆ ಮಧ್ಯಜೀವಕಲ್ಪ ಅಂತ್ಯಗೊಂಡಿದ್ದ ಪ್ರಯುಕ್ತ ಇದನ್ನು ಆಧುನಿಕ ಜೀವಕಲ್ಪದ ಮೊದಲ ಭಾಗವಾಗಿ ಪರಿಗಣಿಸಲಾಗಿದೆ.  

ಕ್ರಿಟೇಷಸ್ ಕಾಲದ ಅಂತ್ಯದಲ್ಲಿ ಪಶ್ಚಿಮ ಯೂರೋಪ್ ಭಾಗದಲ್ಲಿ ಭೂ ಚಲನೆ ಸಂಭವಿಸಿತು.  ಇದರ ಪರಿಣಾಮದಿಂದ ಸಾಗರಗಳು ಭೂ ಪ್ರದೇಶದಿಂದ ಹಿಂಜರಿದುವು.  ಅಲ್ಲಿಯ ಭಾಗಗಳಲ್ಲಿ ಆ ತನಕ ನಿಕ್ಷೇಪಗೊಂಡಿದ್ದ ಶಿಲಾರಾಶಿ ಶಿಥಿಲೀಕರಣ ಕಾರ್ಯಕ್ಕೆ ತುತ್ತಾಯಿತು.  ಇದಾದ ಬಳಿಕ ಇಂಗ್ಲೆಂಡಿನ ಆಗ್ನೇಯ ಭಾಗ, ಬೆಲ್ಜಿಯಮ್ ಮತ್ತು ಫ್ರಾನ್ಸಿನ ಈಶಾನ್ಯ ಭಾಗಗಳು ಸಾಗರಾಕ್ರಮಣಕ್ಕೆ ಒಳಗಾದುವು.  ಈ ಪ್ರದೇಶಕ್ಕೆ ಆಂಗ್ಲೋ-ಫ್ರಾಂಕ್-ಬೆಲ್ಜಿಯಮ್ ಪ್ರಾಂತ ಎಂದು ಹೆಸರು.  ಇಲ್ಲಿ ಮತ್ತೆ ಸಾಗರ ನಿಕ್ಷೇಪ ಕಾರ್ಯ ಪ್ರಾರಂಭವಾಯಿತು.  ಆ ಕಾಲದಲ್ಲಿ ಎರಡು ನದಿಗಳು ಈ ಸಾಗರವನ್ನು ಸೇರುತ್ತಿದ್ದುವೆಂದು ತಿಳಿದಿದೆ.  ಒಂದು ಪಶ್ಚಿಮದಲ್ಲಿ ಹರಿದು ಇಂಗ್ಲೆಂಡಿನ ಈಶಾನ್ಯ ಭಾಗದಲ್ಲಿಯೂ ಮತ್ತೊಂದು ಯೂರೋಪಿನ ದಕ್ಷಿಣ ಅಥವಾ ಈಶಾನ್ಯ ಭಾಗದಿಂದ ಹರಿದು ಪ್ಯಾರಿಸ್ ಪ್ರದೇಶದಲ್ಲಿಯೂ ಈ ಸಾಗರವನ್ನು ಸೇರುತ್ತಿದ್ದುವೆಂದು ನಿಶ್ಚಯಿಸಲಾಗಿದೆ.  ಈ ಪ್ರದೇಶಗಳಲ್ಲಿ ಸಾಗರ ನಿಕ್ಷೇಪದ ಮಧ್ಯೆ ನದಿ ಮೆಕ್ಕಲು ನಿಕ್ಸೇಪಗಳಿವೆ.  ಇಲ್ಲಿಯ ಪೇಲಿಯೊಸೀನ್ ಸ್ತೋಮವನ್ನು ಎರಡು ಭಾಗಗಳಾಗಿ ವಿಭಜಿಸಿರುತ್ತಾರೆ: ಮಾಂಟಿಯನ್ ಮತ್ತು ಥಾನೆಟಿಯನ್.

ಮಾಂಟಿಯನ್ ಶಿಲೆಗಳು ಬೆಲ್ಜಿಯಮ್ ದಕ್ಷಿಣ ಗಡಿಯಲ್ಲಿರುವ ಮಾನ್ಸ್ ಎಂಬಲ್ಲಿ ಉತ್ತಮವಾಗಿ ರೂಪುಗೊಂಡಿವೆ. ಇದಕ್ಕೆ ಸರಿದೂಗುವ ಶಿಲೆಗಳು ಈ ಪ್ರಾಂತದ ಮತ್ತಾವ ಭಾಗದಲ್ಲಿಯೂ ಇಲ್ಲ.  ಪ್ಯಾರಿಸ್ ಪ್ರದೇಶದ ಕ್ಯಾಲ್ಕೆರೆ ಪಿಸೊಲಿಟಿಕ್ ಶಿಲೆಗಳು ಇವುಗಳ ಕಳಪೆ ಪ್ರತಿನಿಧಿಗಳಾಗಬಹುದು.  ಮಾಂಟಿಯಾನ್ ಶಿಲೆಗಳನ್ನು ಕೆಲವು ಸಂದರ್ಭಗಳಲ್ಲಿ ಕ್ರಿಟೇಷಿಯಸ್ ಸ್ತೋಮದಲ್ಲಿ ಸೇರಿಸುವುದುಂಟು.  ಆದರೆ ಅವುಗಳಲ್ಲಿ ಸೆರಿತಿಯಮ್ ಮೊದಲ ಬಾರಿಗೆ ಕಾಣಿಸುವುದರಿಂದಲೂ ಎಕಿನಾಯಿಡ್ ಜಾತಿಯ ಪ್ರಾಣಿಗಳು ಆಧುನಿಕ ಜೀವರಾಶಿಗೆ ಸೇರಿದವುಗಳಾಗಿರುವುದರಿಂದಲೂ ಈ ಸೇರ್ಪಡೆ ಉಚಿತವೆನಿಸದು.  ಈ ಶಿಲೆಗಳಿಗಿಂತ ಕಿರಿಯ ಶಿಲೆಗಳು ಬೆಲ್ಜಿಯಮ್ ದೇಶದ ಲಂಡೇನ್ ಎಂಬಲ್ಲಿ ಇವೆ.  ಇವುಗಳಿಗೆ ಲಂಡೇನಿಯನ್ ಶಿಲಾವರ್ಗ ಎಂದು ಹೆಸರು.  ಇದರ ಕೆಳ ಭಾಗದಲ್ಲಿ ಮಾರಲ್ ಮತ್ತು ಮೇಲುಭಾಗದಲ್ಲಿ ಮರಳು ನಿಕ್ಷೇಪಗಳು ಇವೆ.  ಇವನ್ನು ಅನುಕ್ರಮವಾಗಿ ಹೀರ್ಸಿಯನ್ ಮತ್ತು ಲಂಡೇನಿಯನ್ ಮರಳು ಎನ್ನುವರು.

ಇಂಗ್ಲೆಂಡಿನ ಲಂಡನ್ ಮತ್ತು ಹ್ಯಾಂಪ್‍ಷೈರ್ ಪ್ರದೇಶಗಳಲ್ಲಿ ಬುಲ್‍ಹೆಡ್ ಕರಿಬೆಣಚು ಪದರು, ಗ್ಲಾಕೊನೈಟ್ ಮರಳು ಮತ್ತು ಇವುಗಳ ಮೇಲೆ ಪೂರ್ವದಲ್ಲಿ ಸಾಗರ ಕಣಿವೆ ನಿಕ್ಷೇಪಗಳು ಮತ್ತು ಪಶ್ಚಿಮದಲ್ಲಿ ಭೂಜಲ ನಿಕ್ಷೇಪಗಳು ಇವೆ.  ಬುಲ್‍ಹೆಡ್ ಕರಿಬೆಣಚುಗಳು ಕ್ರಿಟೇಷಿಯಸ್ ಸುಣ್ಣ ನಿಕ್ಷೇಪದ ಶಿಥಿಲೀಕರಣದಿಂದ ಬಿಡುಗಡೆಯಾದವು.  ಗ್ಲಾಕೊನೈಟ್ ಮರಳು ಸಾಮಾನ್ಯವಾಗಿ ಜೀವ್ಯವಶೇಷರಹಿತವಾಗಿದೆ.  ಆದರೆ ಅಲ್ಲೊಂದು ಇಲ್ಲೊಂದು ಪಲಡೋಮಿಯ ಚಿಪ್ಪುಗಳು ಸಿಕ್ಕುತ್ತವೆ.  ಇವುಗಳ ಮೇಲಿರುವ ಪೂರ್ವದ ಸಾಗರ ನಿಕ್ಷೇಪಕ್ಕೆ ವೂಲ್‍ವಿಚ್ ಪದರಗಳೆಂದೂ ಪಶ್ಚಿಮದ ಭೂಜಲ ನಿಕ್ಷೇಪಕ್ಕೆ ರೀಡಿಂಗ್ ಪದರಗಳೆಂದೂ ಹೆಸರು.  ವೂಲ್‍ವಿಚ್ಚಿನಲ್ಲಿ ಸ್ಕಟೆಲ್ಲ ಮತ್ತು ಮಾರ್ರಿಸಿ ಎಂಬ ಕವಡೆಗಳೂ ಕಾರಿಪೊಡಾನ್ ಸ್ತನಿಯ ಅವಶೇಷಗಳೂ ಇವೆ.  ಇದರಲ್ಲಿ ಪಕ್ಷಿಗಳ ಎಲುಬುಗಳಿಂದಾದ ಪದರ ಸಹ ಉಂಟು.  ಪ್ಯಾರಿಸ್ ಪ್ರದೇಶದ ಈ ಕಾಲದ ನಿಕ್ಷೇಪಗಳಲ್ಲಿ ಮ್ಯಾಗ್ನೋಲಿಯ ಮರಗಳ ಮತ್ತು ಆಧುನಿಕ ಜೀವಕಲ್ಪದ ಮೊದಲ ಸ್ತನಿಗಳ ಅವಶೇಷಗಳು ಇವೆ.  

ಉತ್ತರ ಅಮೆರಿಕದಲ್ಲಿ ಪೇಲಿಯೊಸೀನ್ ನಿಕ್ಷೇಪಗಳ ಎರಡು ಮುಖಗಳನ್ನು ಕಾಣಬಹುದು.  ಸಾಗರ ನಿಕ್ಷೇಪ ಗಲ್ಫ್ ಪ್ರದೇಶಕ್ಕೆ ಸೀಮಿತಗೊಂಡಿದೆ.  ಅದು ಶೇಕಡ 3.5 ಪ್ರಮಾಣದಷ್ಟಿದೆ.  ಭೂಜಲ ನಿಕ್ಷೇಪ ಅಥವಾ ನದೀನಿಕ್ಷೇಪಗಳು ಹೇರಳವಾಗಿವೆ.  ಇವುಗಳಲ್ಲಿ ಮರಳು ಶಿಲೆ ಮತ್ತು ಜೇಡು ಶಿಲೆಗಳೇ ಹೆಚ್ಚು.  ಇವುಗಳಿಗೆ ಪೋರ್ಟ್‍ಯೂನಿಯನ್ ಶಿಲಾವರ್ಗ ಎಂದು ಹೆಸರು.  ಇವುಗಳಲ್ಲಿ ಆಧುನಿಕ ಜೀವಕಲ್ಪದ ಮೊತ್ತಮೊದಲಿನ ಸ್ತನಿಗಳ ಅವಶೇಷ ಭಂಡಾರವೇ ಉಂಟು.  ಸಸ್ಯಾವಶೇಷಗಳು ಹೆಚ್ಚಾಗಿರುವುದರ ಜೊತೆಗೆ ಕೆಲವು ಕಲ್ಲಿದ್ದಲಿನ ಪದರಗಳೂ ಇವೆ. 
 
ಇಂಡಿಯಾ ದೇಶದಲ್ಲಿ ಇಯೊಸೀನ್ ಸ್ತೋಮ ಅನೇಕ ಕಡೆಗಳಲ್ಲಿ ರೂಪುಗೊಂಡಿದೆ.  ಅವುಗಳಲ್ಲೆಲ್ಲ ಸಿಂಧ್‍ನಲ್ಲಿರುವ ಸ್ತೋಮವೇ ಉತ್ತಮ ರೀತಿಯದು.  ಇದನ್ನು ರಾಣಿಕೋಟ್, ಲಾಕಿ ಮತ್ತು ಕಿರ್ತಾರ್ ಎಂಬ ಮೂರು ಭಾಗಗಳಾಗಿ ವಿಭಜಿಸಲಾಗಿದೆ.  ಇಲ್ಲಿ ಕ್ರಿಟೇಷಿಯಸ್ ಇಯೊಸೀನ್ ಸ್ತೋಮಗಳ ಮಧ್ಯೆ ಜೀವ್ಯವಶೇಷರಹಿತ ಡೆಕ್ಕನ್ ಟ್ಯಾಪ್ ಶಿಲೆ ಉಂಟು.  ಆದರೆ, ನಟ್ಟಾಲ್ ಮತ್ತು ಎಲ್.ಎಂ. ಡೇವಿಸ್ ಎಂಬುವರು ಲಾಕಿ ಶಿಲಾವರ್ಗದ ಅಲ್ವಿಯೊಲೈನ ಸುಣ್ಣಶಿಲೆಯಲ್ಲಿರುವ ಪೊರಮಿನಿಫೆರ ಪ್ರಾಣಿಗಳು ಇಯೊಸೀನ್ ಯುಗದ ಆದಿಕಾಲವನ್ನು ಸೂಚಿಸುತ್ತವೆ ಎಂಬ ಅಭಿಪ್ರಾಯಕ್ಕೆ ಬಂದಿರುತ್ತಾರೆ.  ಆದ್ದರಿಂದ ಇದರ ಕೆಳಗಿರುವ ರಾಣಿಕೋಟ್ ಶಿಲಾವರ್ಗ ಪೇಲಿಯೊಸೀನ್ ಕಾಲವನ್ನು ಪ್ರತಿನಿಧಿಸಬಹುದಲ್ಲವೆ? ಸಮಾನ ರೇಂಜ್, ಅಸ್ಸಾಮ್ ಮತ್ತು ಬರ್ಮಾಗಳಲ್ಲಿ ಕ್ರಿಟೇಷಿಯಸ್ ಮತ್ತು ಇಯೊಸೀನುಗಳ ನಡುವೆ ಅನುರೂಪತೆ ಇದೆ.  ಇದು ಶಿಲಾನುರೂಪತೆ ಮಾತ್ರ.  ಇವೆರಡು ಸ್ತೋಮಗಳ ಮಧ್ಯೆ ಇರುವ ಶಿಲೆಗಳು ಜೀವ್ಯವಶೇಷರಹಿತವಾಗಿವೆ.  ಅಲ್ಲದೆ, ಇವೆರಡರ ಮಧ್ಯೆ ಜೀವಿಪರಂಪರೆಯ ವಿಚ್ಛಿನ್ನತೆ ಇದ್ದೇ ಇದೆ.

ಪರ್ಯಾಯದ್ವೀಪ ಭಾಗದ ತಿರುಚಿನಾಪಲ್ಲಿ ಮತ್ತು ಪಾಂಡಿಚೆರಿ ಪ್ರದೇಶಗಳಲ್ಲಿ, ನಿಕ್ಷೇಪ ಕಾರ್ಯ ಕ್ರಿಟೇಷಿಯಸ್ ಯುಗದ ಅಂತ್ಯದಲ್ಲಿ ನಿಲ್ಲದೆ ಸ್ವಲ್ಪ ಕಾಲ ಮುಂದುವರಿದಿದೆ.  ರಾಜಮಹೇಂದ್ರಿಯಲ್ಲಿ ಈ ಎರಡು ಪ್ರದೇಶಗಳಲ್ಲಿಯ ನಿಕ್ಷೇಪಗಳ ಅತ್ಯಂತ ಮೇಲ್ಪದರಗಳಿಗೆ ಸರಿದೂಗುವ ಶಿಲೆಗಳ ಸಂಚಯನವಾಗಿದೆ.  ಇವುಗಳಲ್ಲಿ ಕ್ರಿಟೇಷಿಯಸ್ ಕಾಲದ್ದೇ ಆಗಲಿ ಇಯೊಸೀನ್ ಕಾಲದ್ದೇ ಆಗಲಿ ವಿಶಿಷ್ಟ ಜೀವ್ಯವಶೇಷಗಳಿಲ್ಲ.  ಆದ್ದರಿಂದ ಈ ಶಿಲೆಗಳು ಪೇಲಿಯೊಸೀನ್ ಕಾಲದವುಗಳಿರಬೇಕೆಂದು ನಂಬಲಾಗಿದೆ.

ಜೀವರಾಶಿ: ಪೇಲಿಯೊಸೀನ್ ಸ್ತನಿಗಳು ಬಲು ಚಿಕ್ಕವು.  ಅವುಗಳ ಕಾಲುಗಳು ಮೋಟು. ನಾಲ್ಕು ಕಾಲುಗಳ ಮೇಲೆಯೂ ಅವು ನಡೆಯುತ್ತಿದ್ದುವು.  ದವಡೆಗಳು ಉದ್ದ. ಒಂದೇ ರೀತಿಯ ಅನೇಕ ಹಲ್ಲುಗಳಿದ್ದುವು.  ಸರೀಸೃಪ ಮತ್ತು ಪಕ್ಷಿಗಳಿಗಿಂತ ಅವುಗಳ ಮಿದುಳು ಹೆಚ್ಚು ವಿಕಾಸ ಹೊಂದಿದ್ದರೂ ದೇಹ ಗಾತ್ರಕ್ಕೆ ಹೋಲಿಸಿದರೆ ಮಿದುಳು ಚಿಕ್ಕದೇ.  ಈ ಕಾಲದಲ್ಲಿ 15 ಸ್ತನಿಶಾಖೆಗಳಿದ್ದವು.  ಅವುಗಳ ಪೈಕಿ ಮಲ್ಟಿಟೂಬಕ್ರ್ಯುಲೇಟ, ಮಾರ್ಸೂಪಿಯ ಮತ್ತು ಕೀಟಾಹಾರಿಗಳು ಕ್ರಿಟೇಷಿಯಸ್ ಕಾಲದಿಂದ ಮುಂದುವರಿದಿವೆ.  ಉಳಿದವು ಈ ಕಾಲದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡವು.  ಆದರೆ, ಕಾಂಡಿಲಾರ್ತ, ಅಂಬ್ಲಿಪೋಡ ಮತ್ತು ಕ್ರಿಯೊಡಾಂಟ ಶಾಖೆಗಳ ಪ್ರಾಣಿಗಳು ಪ್ರಭಾವಶಾಲಿಗಳಾಗಿ ಇದ್ದುವು.  ಈ ಮೂರು ಶಾಖೆಗಳು ಇದ್ದಕ್ಕಿದ್ದಂತೆ ಉದಯಿಸಿ, ಸ್ವಲ್ಪ ಕಾಲ ಉನ್ನತಿ ಹೊಂದಿ ಅನಂತರ ನಷ್ಟವಂಶಿಗಳಾದುವು.  ಕಾಂಡಿಲಾರ್ತ ಮತ್ತು ಅಂಬ್ಲಿಪೋಡಗಳು ಸಸ್ಯಾಹಾರಿಗಳು.  ಮೊದಲನೆಯವು ತೆಳು ಮತ್ತು ನೀಳಶರೀರಿಗಳು.  ಎರಡನೆಯವುಗಳಿಗೆ ಆನೆಗಳಷ್ಟು ಗಾತ್ರದ ಶರೀರ ಇತ್ತು.  ಪೆನಕೊಡಸ್ ಕಾಂಡಿಲಾರ್ತಗಳ ಉತ್ತಮ ಮಾದರಿಯಾದರೆ, ಕಾರಿಪೊಡಾನ್ ಮತ್ತು ಯೂಂಟತೀರಿಯಮುಗಳು ಮಾದರಿ ಅಂಬ್ಲಿಪೋಡಗಳು.  ಕ್ರಿಯೊಡಾಂಟಗಳು ಈಗಿನ ಮಾಂಸಾಹಾರಿಗಳ ಮೂಲ ಪ್ರಾಣಿಗಳು.  ಇವೇ ಅಲ್ಲದೆ ದಂಶಕ ಮತ್ತು ಪ್ರೈಮೇಟುಗಳು ಪೇಲಿಯೊಸೀನ್ ಯುಗದ ಇತರ ಸ್ತನಿ ಶಾಖೆಗಳು.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ